ಜನವರಿ 16 ಸಂಜೆ 5:30
ಕೈಯಲ್ಲಿ ಪಂಚಾಮೃತ ಹಿಡಿದು ಏನೋ ನೆನಪಿಗೆ ಬಂದು ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಹಿಂದಿನಿಂದ "ಕಣ್ಗೆ ಒತ್ಕೊಂಡು ತಗೊಳೋ" ಎಂದಿದ್ದಳು ಅಮ್ಮ
"ಅಲ್ವೋ ಒಂದು ಉದ್ದರಣೆ ಪಂಚಾಮೃತ ತಗೊಳೋಕೆ ಮೀನಾ ಮೇಷ ಏಣಿಸ್ತೀಯಲ್ಲೋ"
"ಅದಲ್ಲಮ್ಮ, ಇವತ್ತು..."
"ಅದು ಇಲ್ಲ ಇದು ಇಲ್ಲ; ಕಣ್ ಮುಚ್ಕೊಂಡು ಕುಡಿದು ಬಿಡು..."
"ನಾನು ಹೇಳೋದನ್ನ ಪೂರ್ತಿ ಕೇಳಮ್ಮ... "
"ಇದರ ಮೇಲೆ ನಿನ್ನಿಷ್ಟ... ಚಿಕ್ಕವರಾದ್ರೆ ಹೊಡೆದು ಬುದ್ದಿ ಹೇಳಬಹುದು... ಎರಡು ಕತ್ತೆ ವಯಸಾಗಿದೆ... ಪೂಜೆ ಪುನಸ್ಕಾರ ಇಲ್ಲ... ಭಯ ಭಕ್ತಿ ಇಲ್ಲ... at least ದೇವಸ್ಥಾನದಲ್ಲಿ ಒಂದು ಹನಿ ಪಂಚಾಮೃತ ಕುಡಿಯಕ್ಕೇನು..."
"ಬೆಳಗ್ಗೆ ಪೇಪರ್ ಓದಿದ್ಯ ..."
"ಅದೆಲ್ಲ ಈಗ್ಯಾಕೆ... ನಿಂಗೆ... " ಅಂತ ಅಮ್ಮ ಬಡಬಡಿಸುತ್ತಿರುವಾಗಲೆ 'ಥತ್ ... ಆ ಬಡ್ಡಿ ಮಗಂದು ಈಗ್ಲೆ ನೆನಪಿಗೆ ಬರಬೇಕಾ' ಅಂತ ಅನ್ನಿಸಿತು... ಏನದು ನೆನಪಿಗೆ ಬಂದಿದ್ದು ಅಂತ ಹೇಳೋಕೆ ಮುಂಚೆ ಸ್ವಲ್ಪ flashback...
ಜನವರಿ 16, ಬೆಳಗ್ಗೆ 7:15
"2348..." ಮೊದಲ ನಾಲ್ಕು ನಂಬರು ಮ್ಯಾಚ್ ಆಗಿದ್ದು ನೋಡಿ ಸ್ವಲ್ಪ ಖುಷಿ ಆಯಿತು...
"....5901" ಮಿಕ್ಕ ನಾಲ್ಕು ನಂಬರು ಮ್ಯಾಚ್ ಆಗಲು ನಂಬಲಾಗಲಿಲ್ಲ...
ಮತ್ತೆ ಎರಡು ಸಾರಿ ನೋಡಿ confirm ಮಾಡ್ಕೊಂಡೆ... ಮತ್ತೆ ಮತ್ತೆ ನೋಡಿದೆ...ಅದೇ ನಂಬರು ... ಅಪ್ಪಂಗೆ ತೋರಿಸದೆ ... ತಮ್ಮಂಗೆ ತೋರಿಸದೆ ...ಎಲ್ರೂ ಅದೇ ಹೇಳಿದ್ದು ... "ನಂಬರ್ ಮ್ಯಾಚಿಂಗ್" ಅಂತ... ನನ್ನ ಖುಷಿಗೆ ಎಲ್ಲೇ ಇರ್ಲಿಲ್ಲ... ಹೊಡೆದಿತ್ತು ಬಂಪರ್ ... ಈಟಿವಿ ಕನ್ನಡ ಚಾನೆಲ್ ನ ಸಂಕ್ರಾಂತಿಯ ಬಂಪರ್ ... ೫೦ ಲಕ್ಷ... ಜಸ್ಟ್ ಫಾರ್ ಎ ಚೇಂಜ್ ಅಂತ ಒಂದು sms ಮಾಡಿದ್ದೆ ... ಅದಕ್ಕೆ ಬರಬೇಕ ಮೊದಲ ಬಹುಮಾನ... ಇದನ್ನೇನ luck by chance ಅನ್ನೋದು ಅಂತ ಅನ್ಕೊಂಡು ... ಮೊದಲೇ recession ಟೈಮ್ಸ್ ... ಅದ್ರಲ್ಲಿ ೫೦ ಲಕ್ಷ ಅಂದ್ರೆ .. ವಾಹ್ ... ಅದಕ್ಕಿಂತ ಬೇರೊಂದು ಖುಷಿ ಇಲ್ಲ ... ಹೀಗೆ ಖುಷಿಯಲ್ಲಿ ತೇಲಾಡ್ತಾ ಇರ್ಬೇಕಾದ್ರೆ...
"ಏಳುವರೆ ಘಂಟೆ ಆಯಿತು ಏಳೋ ..." ಅಂತ ಒಂದು ಧ್ವನಿ ...
ಥೋ... ಕನಸ ಅಂದ್ಕೊಂಡು... "ಒಂದು ಐದು ನಿಮಿಷ ಕಣಮ್ಮ ...ಪ್ಲೀಸ್"
ಮೊದಲೇ ಚಳಿಗಾಲ... ಕಣ್ ಮುಚ್ಚಿ ಕಣ್ ತೆಗೆಯೂ ಅಷ್ಟ್ರಲ್ಲಿ ಬೆಳಗ್ಗೆ ಆಗ್ಬಿಟ್ಟಿರುತ್ತೆ ಅಂತ ಅನ್ಕೊಂಡು ಮತ್ತೆ ಮಲಗಿದೆ...
"ಎಂಟಾಯ್ತು ಏಳೋ ..."
"ಶನಿವಾರ ಅಲ್ವಾಮ್ಮ... ಇನ್ನೊಂದ್ ಸ್ವಲ್ಪ ಅಮ್ಮ ..."
ಛೆ... ಈ ಹಾಳಾದ್ದು ಟೈಮ್ ಅದೆಷ್ಟು ಬೇಗ ಓಡುತ್ತೆ ಅಂತ ಅಂದ್ಕೊಂಡು ಕಣ್ ಮುಚ್ಚುವಷ್ಟರಲ್ಲಿ..
"ಬೆಳಗ್ಗೆ ಇಷ್ಟೊತ್ ತಂಕ ಮಲಗಿದ್ರೆ ದರಿದ್ರ ಕಣೋ... " ಅಂತ ಇನ್ನೇನು ಶುರು ಮಾಡ್ಬೇಕ್ ಅಷ್ಟರಲ್ಲಿ ಅವಳಿಂದ ಮುಂದೆ ಬರುವ ಮಾರ್ನಿಂಗ್ ರಾಗದ ನೆನಪಾಗಿ ಎದ್ದು ಕುಳಿತೆ ...
ಪ್ರತೀ ಶನಿವಾರದಂತೆ ಈ ಶನಿವಾರ ಕೂಡ ಒಲ್ಲದ ಮನಸಿನಿಂದ ಎದ್ದು ನನ್ನ ಹೊದಿಕೆಯ ಕಡೆ ನೋಡಿ "ಬೆಚ್ಚಗೆ ನೀ ಜೊತೆಗಿರಲು ಬರುವುದು ನಿದ್ದೆ ಹದಿನೈದು ಘಂಟೆಗಳ ಕಾಲ" ಅಂತ ಅನ್ನಿಸಿ ಎದ್ದಿದಾಯ್ತು...
ಎಂದಿನಂತೆ ಚಳಿಗಾಲದ ಬಿಸಿ ಬಿಸಿ ಫಿಲ್ಟರ್ ಕಾಫಿಗೆ ಎದುರು ನೋಡುತ್ತಾ ಅಂದಿನ ನ್ಯೂಸ್ ಪೇಪರ್ ಕೈಗೆ ತಗೊಂಡು, ಪ್ರತೀ ಪುಟವನ್ನು ಓದಿ ಮುಗಿಸಿ ಸ್ನಾನಕ್ಕೆ ಹೋಗುತ್ತಿರುವಾಗ
"ಇವತ್ತು ಶನಿವಾರ, ಏನ್ ಪ್ಲಾನ್ ಇವತ್ತಿಂದು ?"
ವಿನಯ್ ಮನೆಗೆ ಹೋಗಿ ಅಲ್ಲಿ ಎಲ್ಲ ಫ್ರೆಂಡ್ಸ್ ಕೂಡಿ ಹರಟೆ ಹೊಡೆಯೋ ಪ್ಲಾನ್ ಇದ್ರೂ ಸಹ "ಇನ್ನ ಗೊತ್ತಿಲ್ಲಮ್ಮ, ತಿಂಡಿ ಆಗ್ಲಿ .. ಆಮೇಲೆ ನೋಡೋಣ ..." ಅಂತ ಹೇಳಿದ್ದೆ ತಡ
"ಸರಿ ಹಾಗಾದ್ರೆ ... ಮಹಾಲಕ್ಷ್ಮಿ ಲೇಔಟ್ ಗೆ ಹೋಗಿ ಬರೋಣ ... ಅಲ್ಲಿ ಹೋಗಿ ತುಂಬ ದಿನ ಆಯಿತು ... ಹೇಗಿದ್ರೂ ಇವತ್ತು ಶನಿವಾರ ... ಹನುಮಂತನ ಗುಡಿಗೆ ಹೋಗಿ ಬರೋಣ ... ನಂಗೂ ಮನೇಲಿ ಒಬ್ಳೇ ಬೇಜಾರು"
"ಅಲ್ಲ ... ಇವತ್ತು ... ವಿನಯ್ ಮನೆಗೆ ..."
"ಯಾವಾಗ್ಲುನೂ ಅವರಿವರ ಮನೆಗೆ ಹೋಗೋದು ಇದ್ದೆ ಇರ್ರುತ್ತೆ ... ಇವತ್ತು ದೇವಸ್ಥಾನಕ್ಕೆ ಹೋಗೋಣ ... ಹೋದ ವಾರಾನೇ ಹೇಳಿದ್ನಲ್ಲ"
ಹೋದ ವಾರಾನ? ಯಾವಾಗ? ನಿಜವಾಗ್ಲು ಹೇಳಿದ್ಲೋ ಅಥವಾ ಹೇಳಿದ್ದೆ ಅಂತ ಈಗ್ಲೇನೆ ಹೇಳ್ತಾ ಇದಾಳೋ? ಥೆತ್ತೆರಿ... ನನ್ನ ಮರೆವಿಗಿಷ್ಟು ಬೆಂಕಿ ಹಾಕ ಅಂತ ಯೋಚಿಸೋ ಅಷ್ಟ್ರಲ್ಲಿ "ಹೋಗ್ಲಿ ಬಿಡೋ ... ನಿಂಗೆ ಯಾರ್ ಹೇಳ್ತಾರೆ... ನಿಂಗೆ ಹೇಗ್ ಅನ್ಸುತ್ತೋ ಹಾಗೆ ಮಾಡು..." ಅಂತ ಅಂದದ್ದು ನೋಡಿ ನನ್ನ ತೀರ್ಮಾನವನ್ನ ಬದಲಿಸಿ ದೇವಸ್ಥಾನಕ್ಕೆ ಹೋಗಲು ಒಪ್ಪಿಕೊಂಡೆ...
ಜನವರಿ 16 ಸಂಜೆ 5:35
ಕೈಯಲ್ಲಿ ಪಂಚಾಮೃತ ಹಿಡಿದು ಅಮ್ಮನ ಮಾತುಗಳು ಕೇಳುತ್ತಿರಬೇಕಾದರೆ ನೆನಪಿಗೆ ಬಂದಿದ್ದು ಅವತ್ತಿನ ನ್ಯೂಸ್ ಪೇಪರ್ ನಲ್ಲಿದ್ದ "ಪಂಚಾಮೃತ ಸೇವಿಸಿ 180 ಮಂದಿ ಅಸ್ವಸ್ಥ" ಎನ್ನುವ ಸುದ್ದಿ... ಕಾರಣ ಹುಚ್ಚು ನಾಯಿ ಕಡಿದ ಹಸುವಿನ ಹಾಲಿನಿಂದ ತಯಾರಿಸಿದ ಪಂಚಾಮೃತ ಸೇವಿಸಿದ್ದರು ಜನ... ಅದನ್ನು ನೆನೆದು ಒಂದು ರೌಂಡು ಸುತ್ತ ಮುತ್ತಲಿನ ಪಂಚಾಮೃತ ಸೇವಿಸಿದ ಜನರಿಗೆ ಏನೂ ಆಗದೆ ಇರುವುದನ್ನು ಖಚಿತ ಪಡಿಸಿಕೊಂಡು ಸೇವಿಸಿದ್ದಾಯ್ತು...
Subscribe to:
Post Comments (Atom)
No comments:
Post a Comment